ಕಡ್ಫೀಸಿಸ್ II : ಕುಶಾನ ದೊರೆ. ಒಂದನೆಯ ಕಡ್ಫೀಸಿಸನ ಮಗ. ಈತನನ್ನು ಯೆನ್-ಕಾವ್-ಚೆನ್ ಎಂದೂ ಕರೆಯಲಾಗಿದೆ. ನಾಣ್ಯಗಳ ಮೇಲೆ ಕಂಡುಬರುವ ವೆಮ (ಯೆನ್) ಕಡ್ಫೀಸಿಸ್ (ಕಾವ್-ಜೆನ್) ಈತನೇ ಎಂದು ಹೇಳಲಾಗಿದೆ. ಟಿಯೆನ್-ಚೌ ಅಥವಾ ನಿಜವಾದ 

ಭಾರತದ ನೆಲದ ಮೇಲೆ ತನ್ನ ಆಧಿಪತ್ಯ ವಿಸ್ತರಿಸಿದ ಪ್ರಥಮ ಕುಶಾನ ದೊರೆ ಈತನೇ ಎಂಬುದಾಗಿ ಚೀನೀ ಮಾಹಿತಿಗಳು ಹೇಳುತ್ತವೆ. ಟಿಯೆನ್-ಚೌ ಈಗ ಪಂಜಾಬ್ ಎನಿಸಿಕೊಂಡಿರುವ ಪ್ರದೇಶ. ತನ್ನ ತಂದೆಯ ಆಳ್ವಿಕೆಯ ಕಾಲದಲ್ಲಿ ಗಾಂಧಾರ ಪ್ರದೇಶದವರೆಗೂ ಈತ 

ದಂಡೆತ್ತಿ ಬಂದಿದ್ದ. ಸಿಂಹಾಸನವನ್ನೇರಿದ ಕೂಡಲೇ ಭಾರತದ ಗಡಿ ದಾಟಿ ಪಂಜಾಬ್ ಮತ್ತು ಸಿಂಧೂ ಪ್ರದೇಶಗಳನ್ನು ಗೆದ್ದು ಅಲ್ಲಿ ಆಡಳಿತ ನಡೆಸಲು ಒಬ್ಬ ಪ್ರಾಂತ್ಯಾಧಿಕಾರಿಯನ್ನು ನೇಮಿಸಿದ. ಇವನ ಅಧಿಕಾರ ಮಧ್ಯಭಾರತ ಮತ್ತು ವಾರಾಣಸಿಯವರೆಗೂ ವ್ಯಾಪಿಸಿತ್ತೆಂದು 

ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇವನ ನಾಣ್ಯಗಳು ಈ ಹಲವು ಭಾಗಗಳಲ್ಲಿ ದೊರೆತಿದ್ದರೂ ಅಲ್ಲಿ ಇವನ ಆಡಳಿತ ಸ್ಥಾಪಿತವಾಗಿತ್ತೆಂದು ನಿರ್ಧರಿಸಲು ಸಾಕಷ್ಟು ಆಧಾರಗಳಿಲ್ಲ. ಕಡ್ಫೀಸಿಸನ ಅಧಿಕಾರ ಕಾಬೂಲ್, ಕಾಂದಹಾರ್, ಅಫ್ಘಾನಿಸ್ತಾನ, ಚೀನ, 

ತುರ್ಕಿಸ್ತಾನ, ಪಂಜಾಬ್ ಮತ್ತು ಸಿಂಧೂ ಪ್ರದೇಶಗಳ ಮೇಲೆ ಸ್ಥಾಪಿತವಾಗಿತ್ತು. ಈತನ ನಾಣ್ಯಗಳು ಮೇಲ್ಕಂಡ ಎಲ್ಲ ಪ್ರದೇಶಗಳಲ್ಲೂ ದೊರೆತಿವೆ.
ವೆಮ ಕಡ್ಫೀಸಿಸ್ ತನ್ನ ತಂದೆಯಂತೆ ನಾಣ್ಯಗಳ ಮೇಲೆ ಗ್ರೀಕ್ ಮತ್ತು ಖರೋಷ್ಠಿ ಭಾಷೆಯಲ್ಲಿ ತನ್ನ ಬಿರುದುಗಳನ್ನು ಕೆತ್ತಿಸಿದ್ದಾನೆ. ಇವನ ಅನಂತರದ ಕುಶಾನ ರಾಜರು ಬರೀ ಗ್ರೀಕ್ ಭಾಷೆಯನ್ನು ಮಾತ್ರ ನಾಣ್ಯಗಳಲ್ಲಿ ಬಳಸಿದ್ದಾರೆ. ಈತ ತಾಮ್ರ ಮತ್ತು ಕಂಚಿನ ನಾಣ್ಯಗಳ 

ಜೊತೆಗೆ ಚಿನ್ನದ ನಾಣ್ಯಗಳನ್ನೂ ಅಧಿಕ ಸಂಖ್ಯೆಯಲ್ಲಿ ಅಚ್ಚು ಹಾಕಿಸಿದ. ಚಿನ್ನದ ನಾಣ್ಯಗಳನ್ನು ಅಚ್ಚುಹಾಕಿಸಿದ ಪ್ರಥಮ ಕುಶಾನರಾಜ ಈತ. ಈತನ ನಾಣ್ಯಗಳ ಮೇಲೆ ರಾಜಾಧಿರಾಜ, ಇಡೀ ಪ್ರಪಂಚದ ಸ್ವಾಮಿ ಮೊದಲಾದ ತನ್ನ ಬಿರುದುಗಳನ್ನು ಕೆತ್ತಿಸಿಕೊಂಡಿದ್ದಾನೆ. 

ಕೆಲವು ನಾಣ್ಯಗಳ ಮೇಲೆ ತ್ರಿಶೂಲಧಾರಿ ಮಹೇಶ್ವರನ ಚಿತ್ರವಿದೆ. ಈತ ಶಿವೋಪಾಸಕ. ಮಹೇಶ್ವರ ಎಂದು ಈತನಿಗೆ ಬಿರುದಿತ್ತು. ಆ ಕಾಲದಲ್ಲಿ ರೋಮ್, ಚೀನ ಮತ್ತು ಕುಶಾನ ರಾಜ್ಯಗಳ ನಡುವೆ ವ್ಯಾಪಾರ ಚೆನ್ನಾಗಿ ಬೆಳೆದಿತ್ತು. ವೆಮನ ಆಳ್ವಿಕೆ ಪ್ರ.ಶ. 78ರಲ್ಲಿ 

ಆರಂಭವಾಯಿತೆಂದೂ ಆಗಿನಿಂದ ಆಚರಣೆಗೆ ಬಂದ ಶಕೆಯನ್ನು ಸ್ಥಾಪಿಸಿದವನೀತನೇ ಎಂದೂ ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈತನ ನಾಣ್ಯಗಳ ಮೇಲಾಗಲಿ ಶಾಸನಗಳಲ್ಲಾಗಲಿ ಈ ಬಗ್ಗೆ ದೃಢವಾದ ಮಾಹಿತಿ ದೊರೆಯುವುದಿಲ್ಲ. ಅಲ್ಲದೆ ಈತನ 

ಆಳ್ವಿಕೆ ಆ ವೇಳೆಗಾಗಲೇ ಕೊನೆಗೊಂಡಿತ್ತೆಂದೂ ತಿಳಿದುಬರುತ್ತದೆ. ಎರಡನೆಯ ಕಡ್ಫೀಸಿಸನ ನಿಧನನಂತರ ಅಧಿಕಾರಕ್ಕೆ ಬಂದವನು ಕನಿಷ್ಕ.  (ಜಿ.ಆರ್.ಆರ್.) 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ